ಕ್ರೋಟಾಲಿಡೇ (ಕ್ರೋಟಲಿನೆ)	

ಮಂಡಲ ಹಾವುಗಳ ಹತ್ತಿರದ ಸಂಬಂಧಿಯಾದ ಗುಳಿಮಂಡಲಗಳ ಕುಟುಂಬ. ಈ ಕುಟುಂಬದ ಹಾವುಗಳಿಗೆ ಕಣ್ಣಿನ ಮುಂದೆ ಪ್ರತಿಪಾಶ್ರ್ವದಲ್ಲೂ ಕಣ್ಣಿಗೆ ಸ್ವಲ್ಪ ಕೆಳಮಟ್ಟದಲ್ಲಿ ಒಂದು ಕುಳಿಯಿದೆ. ಇದರ ಸ್ಥಾನ ಬೇರೆ ಬೇರೆ ಪ್ರಭೇದಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಎಲ್ಲ ಪ್ರಭೇದಗಳಲ್ಲೂ ಇದು ಇದ್ದೇ ಇದೆ. ಆದ್ದರಿಂದ ಈ ಹಾವುಗಳನ್ನು ಗುಳಿಸರ್ಪಗಳೆಂದೂ (ಪಿಟ್ ವೈಪರ್ಸ್) ಕರೆಯುತ್ತಾರೆ. ಮೂಗಿನ ಹೊಳ್ಳೆಗಿಂತಲೂ ಪ್ರಧಾನವಾಗಿ ಎದ್ದು ಕಾಣುವ ಈ ಅಂಗಗಳನ್ನು ಇನ್ನೆರಡು ಮೂಗಿನ ಹೊಳ್ಳೆಗಳೇ ಎಂದು ಭಾವಿಸಿ ಹಾವುಗಳನ್ನು ದಕ್ಷಿಣ ಅಮೆರಿಕದಲ್ಲಿ ನಾಲ್ಕು ಹೊಳ್ಳೆಗಳ (ಫೋರ್ ನಾಸ್ಟ್ರಿಲ್ಸ್) ಹಾವು ಎನ್ನುವುದುಂಟು. ಈ ಕುಳಿ ನಾಸಿಕರಂಧ್ರವಲ್ಲ. ಇದೊಂದು ಉಷ್ಣಗ್ರಾಹಕಾಂಗವೆಂಬುದು ಈಚೆಗೆ ಗೊತ್ತಾಗಿದೆ. ಕುಳಿ ಇಬ್ಭಾಗವಾಗಿದ್ದು ಇವುಗಳ ನಡುವೆ ಇರುವ ಪೊರೆಯಲ್ಲಿ ಯಥೇಚ್ಛವಾಗಿ ನರಗಳ ತುದಿಗಳು ಹರಡಿಕೊಂಡಿವೆ. ರಚನೆಯಲ್ಲಿ ಕರ್ಣದುಂದುಭಿಯನ್ನು ಈ ಪೊರೆ ಹೋಲುತ್ತದೆ. ಹಾವುಗಳಲ್ಲಿ ಕರ್ಣದುಂದುಭಿ ಇಲ್ಲದ್ದರಿಂದ ಕೆಲವರು ಇದನ್ನೇ ಕರ್ಣದುಂದುಭಿಯೆಂದು ಭಾವಿಸಿ ಹಾವುಗಳು ಇದರ ಸಹಾಯದಿಂದ ಕೇಳಬಲ್ಲವೆಂದು ಭಾವಿಸಿದ್ದರು. ಆದರೆ ಈ ಭಾವನೆಗೆ ಅಗತ್ಯವಾದ ಪ್ರಾಯೋಗಿಕ ಸಾಕ್ಷ್ಯಗಳು ಒದಗದ್ದರಿಂದ ಪೊರೆ ರಚನೆ ಎಂಬುದು ನಮಗೆ ಅರಿವಿಲ್ಲದಂಥ ಇನ್ನಾವುದೋ ಒಂದು ವಿಶೇಷ ಜ್ಞಾನೇಂದ್ರಿಯವಿರಬೇಕೆಂದೂ ವಾದಿಸಿದರು. ಇದರ ನೆರವಿನಿಂದ ಹಾವು ಬಿಸಿರಕ್ತ ಪ್ರಾಣಿಗಳಾದ ಸ್ತನಿ ಮತ್ತು ಪಕ್ಷಿಗಳನ್ನು ಗುರುತಿಸಬಲ್ಲುದು ಎಂದು ನೊಬೆಲ್ ಮತ್ತು ಷ್ಮಿಡ್ಟ್ ಸೂಚಿಸಿದರು.  (1935) ಆಹಾರವನ್ನು ಗುರುತಿಸುವುದಕ್ಕೂ ಹಾವಿಗೂ ಇರುವ ಅಂತರವನ್ನು ಅರಿಯುವುದಕ್ಕೂ ಇದು ಸಹಾಯ ಮಾಡುತ್ತದೆ.

ಕ್ರೋಟಾಲಿಡೀ ಹಾವುಗಳು ಗಾತ್ರದಲ್ಲೂ ನೋಟದಲ್ಲೂ ಭೀತಿಹುಟ್ಟಿಸುವಂಥವು. ಯೂರೇಷಿಯದ ಮಂಡಲದ ಹಾವುಗಳಿಗಿಂತಲೂ ದಪ್ಪವಾಗಿದ್ದು ಇವುಗಳಲ್ಲಿ ಕೆಲವು 8' ಉದ್ದವಿದ್ದು 16 ಪೌಂಡ್ ತೂಗುತ್ತವೆ. ಇವುಗಳ ವಿಷದ ಹಲ್ಲುಗಳು ಮಾತ್ರ ಚಿಕ್ಕವಾಗಿವೆ. ವಿಷಗ್ರಂಥಿಗಳು ಇತರ ವಿಷಪೂರಿತ ಹಾವುಗಳಲ್ಲಿನ ರಚನೆಯಂತೆಯೆ ಇವೆ. ಮೇಲ್ದವಡೆಯಲ್ಲಿ ವಿಷದ ಹಲ್ಲುಗಳನ್ನುಳಿದು ಇನ್ನಾವ ಹಲ್ಲುಗಳೂ ಇಲ್ಲ. ಮುಖದ ಮೇಲಿನ, ಮೇಲೆ ವಿವರಿಸಿದ ಕುಳಿಗಳ ಹಿಂದೆ ಒಂದೊಂದು ತಗ್ಗು ಕಾಣುತ್ತದೆ. ಈ ತಗ್ಗು ಮತ್ತು ಕುಳಿ ಇತರ ವೈಪರ್ ಜಾತಿಯ ಹಾವುಗಳಾವುದರಲ್ಲೂ ಇಲ್ಲ. ಎಂದರೆ, ಕುಳಿಹಾವುಗಳನ್ನು ಗುರುತಿಸಲು ಇವೆರಡೂ ವಿಶಿಷ್ಟ ಲಕ್ಷಣಗಳೆನಿಸಿವೆ.

ಕ್ರೋಟಾಲಿಡೀ ಕುಟುಂಬಕ್ಕೆ ಸೇರಿದ ಮುಖ್ಯಬಗೆಯ ಹಾವುಗಳು : ಬುಡುಬುಡಿಕೆ ಹಾವು (Rattle snakes, crotalus ) ಕಾಪರ್‍ಹೆಡ್ ( Agkistrodon controtrix) ಮತ್ತು ಅಂಗ್ಕಿಸ್ಟ್ರಡಾಸ್ ಕಾಂಟಾರ್‍ರ್ಟಿಕ್ಸ್: ಕಾಟನ್ ಮೌತ್ ( Agkistrodon piscivorus) ಅಗ್ಕಿಸ್ಟ್ರಡಾನ್ ಪಿಸಿವೋರಸ್. ಬುಡುಬುಡಿಕೆ ಹಾವು ಉತ್ತರ ಮತ್ತು ದಕ್ಷಿಣ ಅಮೆರಿಕಾಕ್ಕೆ ಸೀಮಿತ. ಟ್ರೈಮರ್‍ಸ್ಯುರಸ್ ಅಥವಾ ಲ್ಯಾಖೇಸಿಸ್ ಜಾತಿಯ ಗುಳಿ ಮಂಡಲಗಳು ದಕ್ಷಿಣ ಭಾರತದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿ ಮಲಬಾರ್ ಪಿಟ್ ವೈಪರ್, ಗ್ರೀನ್ ಪಿಟ್ ವೈಪರ್, ಹಂಪ್‍ನೋಸ್ಡ್ ಪಿಟ್ ವೈಪರ್ ಬ್ಯಾಂಬೂ ಪಿಟ್ ವೈಪರ್ ಮುಂತಾದ ಪ್ರಭೇದಗಳು ಕಾಣಬರುತ್ತವೆ.   (ಕೆ.ಎಂ.ವಿ.)
ಪರಿಷ್ಕರಣೆ:
ಡಾ|| ಎನ್. ಎಸ್. ಲೀಲಾ
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ